ಗ್ಲಾಕ್ಸಿನಿಯ -
ಜೆಸ್ನೀರಿಯೇಸೀ ಕುಟುಂಬಕ್ಕೆ ಸೇರಿದ ಸಿನಿಂಜಿಯ ಸ್ಟೀಶಿಯೋಸ ಪ್ರಭೇದದ ಹಲವಾರು ಅಲಂಕಾರಸಸ್ಯಗಳಿಗಿರುವ ಸಾಮಾನ್ಯ ಹೆಸರು. ಎಲ್ಲವೂ ಬ್ರಜಿûಲಿನ ಮೂಲನಿವಾಸಿಗಳು. ಮೃದುವಾದ ಮಖಮಲ್ಲಿನಂಥ ಎಲೆಗಳನ್ನೂ ಅಪಾರವಾದ ವರ್ಣ ವೈವಿಧ್ಯವುಳ್ಳ ಹೂಗಳನ್ನೂ ಪಡೆದಿರುವುದರಿಂದ ಇವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಕುಂಡ ಸಸ್ಯಗಳನ್ನಾಗಿ ಬೆಳೆಸುತ್ತಾರೆ.
ಗ್ಲಾಕ್ಸಿನಿಯದಲ್ಲಿ ಸುಮಾರು 25 ಬಗೆಗಳಿವೆ. ಎಲ್ಲವೂ ಚಿಕ್ಕಗಾತ್ರದ ಬಹುವಾರ್ಷಿಕ ಮೂಲಿಕೆಗಳು. ಇವುಗಳಲ್ಲೆಲ್ಲ ನೆಲದೊಳಗೇ ಹುದುಗಿ ಬೆಳೆಯುವ ಟ್ಯೂಬರ್ ಮಾದರಿಯ ಪ್ರಕಂದವಿದೆ. ಇದರಿಂದ ಕವಲೊಡೆಯದ ಇಲ್ಲವೆ ಕವಲೊಡೆದ ಅನೇಕ ಕಾಂಡಗಳು ಹುಟ್ಟಿ ನೆಲದಿಂದ ಮೇಲಕ್ಕೆ ಬೆಳೆಯುತ್ತವೆ. (ಕೆಲವು ಬಗೆಗಳಲ್ಲಿ ಈ ತೆರನ ಕಾಂಡವಿರುವುದಿಲ್ಲ). ಎಲೆಗಳು ಕಾಂಡಗಳ ಮೇಲೆ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳಿಗೆ ಉದ್ದನೆಯ ತೊಟ್ಟಿದೆ. ಹೂಗಳು ಒಂಟೊಂಟಿಯಾಗಿ ಇಲ್ಲವೆ ಹೂಗೊಂಚಲುಗಳಲ್ಲಿ ಅರಳುತ್ತವೆ. ಹೂಗಳ ಬಣ್ಣ ಬಿಳಿ, ನಸುಗೆಂಪು, ಕಡುಗೆಂಪು, ನೀಲಿ, ಉದಾ- ಹೀಗೆ ವೈವಿಧ್ಯಮಯ. ಜೊತೆಗೆ ದಳಸಮೂಹದ ಗಂಟಲಿನ ಬಳಿ ಚೆಲುವಾದ ಚುಕ್ಕಿಗಳಿದ್ದು ಹೂವಿನ ಅಂದವನ್ನು ಹೆಚ್ಚಿಸುತ್ತವೆ. ಪ್ರತಿ ಹೂವಿನಲ್ಲಿ 5 ದಳಗಳಿಂದ ಕೂಡಿದ ಸಂಯುಕ್ತ ಮಾದರಿಯ ಹಾಗೂ ಗಂಟೆಯಾಕಾರದ ದಳ ಸಮೂಹ, 4 ಕೇಸರಗಳು ಮತ್ತು ಎರಡು ಕಾರ್ಪೆಲುಗಳ ಉಚ್ಚಸ್ಥಾನದ ಅಂಡಾಶಯ ಇವೆ. ಕೇಸರಗಳ ಪರಾಗಕೋಶಗಳು ಜೊತೆ ಜೊತೆಯಾಗಿ ಸೇರಿಕೊಂಡುಬಿಟ್ಟಿದೆ. ಬಹುಪಾಲು ಬಗೆಗಳಲ್ಲಿ ದಳ ಸಮೂಹ ಒಂಟಿಸುತ್ತಿನದಾದರೂ ಕೆಲವಲ್ಲಿ ಎರಡು ಸುತ್ತಿನದಾಗಿರುವುದುಂಟು.

ಗ್ಲಾಕ್ಸಿನಿಯದ ವಿವಿಧ ಬಗೆಗಳಲ್ಲಿ ಸ್ಪೀಶಿಯೋಸ, ಡೆವರ್ಸಿಫೋಲಿಯ, ಜೆಸ್ನೆರಾಯ್ಡಿಸ್, ಗ್ಲಾಬ್ರ, ಮ್ಯಾಕ್ಯುಲೇಟ ಮತ್ತು ಮಲ್ಟಿಫ್ಲೋರಗಳು ಬಲು ಮುಖ್ಯವಾದವು.

ಗ್ಲಾಕ್ಸಿನಿಯದ ವೃದ್ಧಿಗೆ ಉಷ್ಣ ಹವಾಗುಣ ಉತ್ತಮ. ಎಲ್ಲ ಬಗೆಗಳನ್ನೂ ಬೀಜಗಳಿಂದ, ಪ್ರಕಂದದ ತುಂಡುಗಳಿಂದ ಇಲ್ಲವೆ ಎಲೆಗಳಿಂದ ವೃದ್ಧಿಸಬಹುದು.
(ಎಂ.ಎಚ್.ಎಂ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ